ಫುಲ್ವನ್, ರಾಬರ್ಟ್  
1765-1815. ಹಬೆಯಂತ್ರ ನೌಕೆಯ ಸಂಶೋಧಕ ನಿರ್ಮಾಪಕ. ಅಮೆರಿಕದ ಪೆನ್ಸಿಸಿಲ್ವೇನಿಯ ಪ್ರಾಂತಕ್ಕೆ ಸೇರಿದ ಲಿಟ್ಲ್ ಬ್ರಿಟನ್ ಎಂಬಲ್ಲಿ 1765 ನವೆಂಬರ್ 14ರಂದು ಜನನ. ಬಾಲ್ಯದಿಂದಲೂ ಪ್ರತಿಭಾವಂತ. ಬಿಡುವೇಳೆಯನ್ನು ಯಂತ್ರ ದುರಸ್ತಿಗಾರರ ಅಂಗಡಿಗಳಲ್ಲಿ ಕಳೆಯುತ್ತಿದ್ದ. ಹದಿಮೂರನೆಯ ವಯಸ್ಸಿನಲ್ಲಿ ಮತ್ಸ್ಯೋದ್ಯಮ ನೌಕೆಗೆ ತಿರುಗಣೆ ಚಕ್ರ ಜೋಡಿಸಿ ಹುಟ್ಟುಹಾಕುವ ಉಪಾಯ ತೋರಿಸಿಕೊಟ್ಟಿದ್ದ. ಜೀವನೋಪಾಯಕ್ಕಾಗಿ ಫಿಲಡೆಲ್ಫಿಯಾದ ಸರಾಫರ ಬಳಿ ಕೆಲ¸ಮಾಡತೊಡಗಿದ. ಹದಿನೇಳರಿಂದ ಇಪ್ಪತ್ತೊಂದನೆಯ ವಯಸ್ಸಿನತನಕ ವರ್ಣಚಿತ್ರಕಲೆಯನ್ನು ಕಲಿಯುತ್ತಿದ್ದ. ಇವನ ಕಲಾ ಪ್ರತಿಭೆ ಗುರುತಿಸಿದ ಫಿಲಡೆಲ್ಫಿಯಾದ ಕೆಲವು ವರ್ತಕರು ಧನ ಸಹಾಯ ಮಾಡಿ ಇವನನ್ನು ಇಂಗ್ಲೆಂಡಿಗೆ ಹೆಚ್ಚಿನ ಅಭ್ಯಾಸಕ್ಕಾಗಿ ಕಳುಹಿಸಿಕೊಟ್ಟರು (1786). ಅಲ್ಲಿ ಸಾಕಪ್ಟು ಹೆಸರುಗಳಿಸಿದ್ದ ಬೆಂಜಮಿನ್ ವೆಸ್ಟ್ ಎಂಬವನ ಮನೆಯಲ್ಲಿ ಇದ್ದುಕೊಂಡು ವರ್ಣಚಿತ್ರಕಲೆಯ ಅಭ್ಯಾಸ ಮುಂದುವರಿಸಿದ. ಆದರೆ ಹೆಚ್ಚು ದಿನಗಳಕಾಲ ಈ ವಾಸ್ತವ್ಯ ಮುಂದುವರಿಯಲಿಲ್ಲ. ವೆಸ್ಟ್‍ನ ಮನೆ ಬಿಟ್ಟ ಬಳಿಕವೂ ವರ್ಣಕಲೆಯ ಅಭ್ಯಾಸ ಮುಂದುವರಿಸಿ ಅದರಲ್ಲಿ ಒಳ್ಳೆಯ ಹೆಸರು ಗಳಿಸಿದ. ಡೆವನ್‍ಷೈರಿನಲ್ಲಿದ್ದ ಅವಧಿಯಲ್ಲಿ ಡ್ಯೂಕ್ ಆಫ್ ಬ್ರಿಡ್ಜ್ ವಾಟರ್ ಮತ್ತು ಅರ್ಲ್ ಸ್ಟಾನ್‍ಹೋಪ್ ಅವರ ಸ್ನೇಹ ವಿಶ್ವಾಸ ಸಂಪಾದಿಸಿದ. 1793ರ ಹೊತ್ತಿಗೆ ಕಲೆಯ ಬಗ್ಗೆ ಆಸಕ್ತಿ ಕಳೆದುಕೊಂಡು ಒಳನಾಡ ಜಲಮಾರ್ಗ ಸಂಚಾರದ ವಿಷಯದಲ್ಲಿ ಯೋಜನೆಗಳನ್ನು ರೂಪಿಸುವುದರಲ್ಲಿ ಮಗ್ನನಾಗಿ ಜಲಸಂಚಾರಕ್ಕೆ ಹಬೆಯಂತ್ರ ನೌಕೆ ಬಳಸುವ ಸಾಧ್ಯತೆಗಳನ್ನು ಕುರಿತು ಗಂಭೀರವಾಗಿ ಯೋಚಿಸತೊಡಗಿದ.

	1794ರಲ್ಲಿ ಫುಲ್ಟನ್ ಬ್ರಿಟಿಷ್ ಸಂಸ್ಥೆಯೊಂದಕ್ಕೆ ಅಮೃತಶಿಲೆಯನ್ನು ಕತ್ತರಿಸುವಯಂತ್ರದ ಸುಧಾರಣೆಯ ಬಗ್ಗೆ ಸಲಹೆ ನೀಡಿದ. ಇದರ ಉಪಯುಕ್ತತೆ ಕಂಡ ಆ ಸಂಸ್ಥೆ ಇವನಿಗೆ ಬಹುಮಾನ ನೀಡಿ ಗೌರವಿಸಿತು. ಇದರಿಂದ ಪ್ರಚೋದಿತನಾಗಿ ಅಗಸೆನಾರಿನಗಿರಣಿ ಮತ್ತು ಹೂಳು ಎತ್ತುವ ಯಂತ್ರಗಳನ್ನು ಉತ್ತಮಪಡಿಸುವ ಹಕ್ಕು ಪಡೆದುಕೊಂಡ. ಇದೇ ವೇಳೆ ತನ್ನನ್ನು ತಾನೇ ಸಿವಿಲ್ ಎಂಜಿನಿಯರ್ ಎಂದು ಕರೆದುಕೊಂಡು ಕಾಲುವೆಗಳ ಬಳಕೆ ಎಂಬ ಲೇಖನ ಪ್ರಕಟಿಸಿದ. ಇವನು ಕಲಿತಿದ್ದ ಲೇಖನಕಲೆ ಮತ್ತು ವರ್ಣಕಲೆ ಇಲ್ಲಿ ವಿಶೇಷ ಉಪಯೋಗಕ್ಕೆ ಬಂದವು,  1797ರಲ್ಲಿ ಪ್ಯಾರಿಸ್ಸಿಗೆ ಹೋದ. ಅಲ್ಲಿ ಭೌತ, ಗಣಿತ ಮತ್ತು ರಸಾಯನವಿಜ್ಞಾನಗಳನ್ನು ಅಧ್ಯಯನ ಮಾಡಿದುದಾಗಿ ತಿಳಿದುಬರುತ್ತದೆ. ಅಲ್ಲಿದ್ದಷ್ಟು ಕಾಲವೂ ಹಬೆಯಂತ್ರ ನೌಕೆಗಳ ನಿರ್ಮಾಣದ ವಿಚಾರದÀಲ್ಲಿಯೇ ಮಗ್ನನಾಗಿದ್ದ. ಅದರ ಜೊತೆಗೆ ಶತ್ರುನೌಕೆಗಳನ್ನು ಧ್ವಂಸ ಮಾಡಬಲ್ಲ ಜಲಾಂತರ್ಗಾಮಿ ನೌಕೆಗಳ ಬಗ್ಗೆಯೂ ಸಂಶೋಧನೆ ನಡೆಸುತ್ತಿದ್ದ. 1800-01ರ ಅವಧಿಯಲ್ಲಿ ನಾಟಿಲಸ್ ಎಂಬ ಜಲಾಂತರ್ಗಾಮಿಯನ್ನು ಚಾಲಿಸುವುದರಲ್ಲಿ ಸಾಕಷ್ಟು ಯಶಸ್ಸು ಗಳಿಸಿದ. ಆದರೆ ಸಿಯಾನ್ ಬದಿಯ ಮೇಲೆ ಇಬ್ಬರು ಪ್ರಯಾಣಿಕರಿದ್ದ ಹಬೆಯಂತ್ರ ನೌಕೆಯನ್ನು ನಡೆಸುವುದು ವಿಫಲವಾಯಿತು (1803). ಆ ನೌಕೆ ಮುಳುಗಿ ಹೋದರೂ ಅದರಿಂದಾಗಿ ಎಷ್ಟೋ ವಿಷಯಗಳನ್ನು ತಿಳಿದುಕೊಳ್ಳಲು ಸಾಧ್ಯವಾಯಿತು. ಮುಂದೆ ಇವನು ಜಲಾಂತರ್ಗಾಮಿಗಳನ್ನು ಕುರಿತ ಯೋಜನೆ ತಯಾರಿಸಿ ಸರ್ವಾಧಿಕಾರಿ ನೆಪೋಲಿಯನ್ನನ ಫ್ರೆಂಚ್‍ಪ್ರಭುತ್ವಕ್ಕೆ ಒಪ್ಪಿಸಿದಾಗ ಅದು ಬ್ರಿಟಿಷ್ ನೌಕೆಗಳನ್ನು ಪತ್ತೆಹಚ್ಚಿ ಅವನ್ನು ನಾಶಪಡಿಸುವ ಜವಾಬ್ದಾರಿಯನ್ನು ಇವನಿಗೆ ವಹಿಸಿ ಸಮುದ್ರತೀರದಲ್ಲಿ ಹೊಂಚುಹಾಕಿಕೊಂಡಿರಲು ಸೂಚನೆ ನೀಡಿತು. ಇದರಲ್ಲಿ ನಿರೀಕ್ಷಿಸಿದಷ್ಟು ಯಶಸ್ಸು ದೊರೆಯದೆ ಹೋದುದರಿಂದ ಪ್ರಭುತ್ವ ಜಲಾಂತರ್ಗಾಮಿ ಯೋಜನೆಯ ಬಗ್ಗೆ ಹೆಚ್ಚು ಆಸಕ್ತಿ ತೋರಿಸದೆ ಹೋಯಿತು. ಅರ್ಲ್‍ಸ್ಟಾನ್ ಹೋಪ್‍ನ ಶಿಫಾರಸಿನಿಂದಾಗಿ ಬ್ರಿಟಿಷ್ ಸರ್ಕಾರ 1804 ಮೇ ಯಲ್ಲಿ ಫುಲ್ಟನ್ನನನ್ನು ಆಹ್ವಾನಿಸಿ, ಥೇಮ್ಸ್ ನದಿಯ ಮೇಲೆ ಪ್ರಯೋಗ ನಡೆಸುವಂತೆ ಕೇಳಿಕೊಂಡಿತು. ಆದರೆ 1805ರಲ್ಲಿ ನಡೆದ ಟ್ರಫಾಲ್ಗರ್ ಯುದ್ಧದ ತರುವಾಯ ಬ್ರಿಟಿಷ್ ಸರ್ಕಾರ ಈ ಬಗ್ಗೆ ಹೆಚ್ಚು ಆಸಕ್ತಿ ತೋರಿಸದೆ ಇದ್ದುದರಿಂದ ಇವನು ತಾಯಿನಾಡಾದ ಅಮೆರಿಕಕ್ಕೆ ಹಿಂತಿರುಗಿ ನ್ಯೂಜೆರ್ಸಿಯ ಬಳಿ ಯಂತ್ರ ಕಾರ್ಯಾಲಯ ಸ್ಥಾಪಿಸಿದ (1806).

	ಅಮೆರಿಕಕ್ಕೆ ಹಿಂತಿರುಗಿದ ಬಳಿಕ ಫುಲ್ಟನ್ ಜಲಾಂತರ್ಗಾಮಿಗಳ ಬಗ್ಗೆ ಯೋಚಿಸುವುದು ಬಿಟ್ಟು ಜಲಸಂಚಾರೋದ್ಯಮದ ಬಗ್ಗೆ ಹೆಚ್ಚು ಆಸಕ್ತನಾದ. ಇಪ್ಪತ್ತನಾಲ್ಕು ಅಶ್ವಸಾಮಥ್ರ್ಯದ ಕ್ಲರ್ಮಾಂಟ್ ನೌಕೆಯನ್ನು 1807ರಲ್ಲಿ ಹಡ್ಸನ್ ನದಿಯ ಮೇಲೆ ಯಶಸ್ವಿಯಾಗಿ ಚಲಿಸುವಂತೆ ಮಾಡಿದ. ಆಗಸ್ಟ್ 17ರಂದು ಇದೇ ನೌಕೆ ನ್ಯೂಯಾರ್ಕಿನಿಂದ ಆಲ್ಬೆನಿಯವರೆಗಿನ 240 ಕಿಮೀಗಳ ದೂರವನ್ನು 32 ಗಂಟೆಗಳಲ್ಲಿ ಕ್ರಮಿಸಿ ವಿಕ್ರಮ ಸಾಧಿಸಿತು. ಸರ್ಕಾರ ಇವನಿಗೆ ಏಕಸ್ವಾಮ್ಯ ಕೊಟ್ಟದ್ದಕ್ಕಾಗಿ ಮತ್ತು ಇಂಥ ನೌಕೆಯ ನಿರ್ಮಾಣದ ಕೀರ್ತಿ ಇವನಿಗೊಬ್ಬನಿಗೇ ಪ್ರಪ್ರಥಮವಾಗಿ ಲಭಿಸಿದ್ದಕ್ಕಾಗಿ ಇವನು ಹಲವು ಮೊಕದ್ದಮೆಗಳನ್ನು ಎದುರಿಸಬೇಕಾಗಿ ಬಂದಿತು. ಆದರೂ ಸಂಶೋಧನೆಯನ್ನು ಸಂಪೂರ್ಣವಾಗಿ ಕೈಬಿಡಲಿಲ್ಲಿ. ಇವನು ನಿರ್ಮಿಸಿದ ನ್ಯೂ ಆರ್ಲಿಯನ್ಸ್ ನೌಕೆ 1811 ರಲ್ಲಿ ಪ್ರಥಮವಾಗಿ ಮಿಸಿಸಿಪಿ ನದಿಯ ಮೇಲೆ ಸಂಚರಿಸತೊಡಗಿತು. ಅಮೆರಿಕದ ಒಳನಾಡ ಜಲಮಾರ್ಗ ಸಂಚಾರಕ್ಕೆ ಇದು ನಾಂದಿ ಹಾಡಿತು ಎನ್ನಬಹುದು. 1812ರಲ್ಲಿ ಹಡ್ಸನ್ ಮತ್ತು ಈಸ್ಟ್ ನದಿಗಳಲ್ಲಿ ಪ್ರಯಾಣಿಕರ ಎರಡು ನೌಕೆಗಳು ಸಂಚರಿಸಲಾರಂಭಿಸಿದುವು. ಇವನ ನಿರ್ದೇಶನದಲ್ಲಿ 17 ಹಬೆಯಂತ್ರ ನೌಕೆಗಳು, ಒಂದು ಜಲಾಂತರ್ಗಾಮಿ ನೌಕೆ ಮತ್ತು ಅನೇಕ ಸುಧಾರಿತ ದೋಣಿಗಳು ನಿರ್ಮಿತವಾದವು.

	ನ್ಯೂಯಾರ್ಕ್ ಬಂದರನ್ನು ರಕ್ಷಿಸಲು ಸಾಧ್ಯವಾಗುವಂಥ ತೇಲು ಕೋಟೆಯನ್ನು ನಿರ್ಮಿಸುವುದು ಫುಲ್ಟನ್ ಹಾಕಿಕೊಂಡ ಕೊನೆಯ ಯೋಜನೆ. ಈ ನೌಕೆಯನ್ನು ಡೆಮೊಲಾಗಸ್ ಅಥವಾ ಫೂಲ್ಟನ್ ಒಂದು ಎಂದು ಕರೆಯಲಾಯಿತು. ಮೂವತ್ತು ಫಿರಂಗಿಗಳಿಂದ ಕೂಡಿದ ಈ ಯುದ್ಧನೌಕೆಯನ್ನು 1814 ಅಕ್ಟೋಬರಿನಲ್ಲಿ ತೇಲಿಬಿಡಲಾಯಿತು. 1812ರಲ್ಲಿ ಪ್ರಾರಂಭವಾದ ಯುದ್ಧ ಅನಿರೀಕ್ಷಿತವಾಗಿ ನಿಂತುಹೋದುದರಿಂದ ಡೆಮೊಲಾಗಸನ್ನು ಬಳಸಿಕೊಳ್ಳಬೇಕಾದ ಪ್ರಮೇಯ ಒದಗಲಿಲ್ಲ. ಇಷ್ಟಾದರೂ ಇವನ ವಿರುದ್ಧ ನಡೆಯುತ್ತಿದ್ದ ಮೊಕದ್ದಮೆಗಳು ರದ್ದಾಗಲಿಲ್ಲ. ಇವನು ಜಲಾಂತರ್ಗಾಮಿ ಯುದ್ಧನೌಕೆಯ ಬಗ್ಗೆ ಸಂಶೋಧನೆಯನ್ನು ಬಿಡಲೂ ಇಲ್ಲ. ವ್ಯವಹಾರ ಕುಶಲನೂ ಪ್ರತಿಭಾವಂತನೂ ಕಲ್ಪನಾಶಕ್ತಿಯುಳ್ಳವನೂ ಆಗಿದ್ದ ಫುಲ್ಟನ್ ಜೀವನದಲ್ಲಿ ಸಾಕಷ್ಟು ಯಶಸ್ವಿಯಾದರೂ ಅನಿವಾರ್ಯ ತೊಂದರೆಗಳಿಂದ ಮಾನಸಿಕ ಯಾತನೆಗೆ ಗುರಿಯಾಗಿ ಸಂಶೋಧನೆಯ ಮದ್ಯದಲ್ಲಿಯೇ ನ್ಯೂಯಾರ್ಕಿನಲ್ಲಿ 1815 ಫೆಬ್ರುವರಿ 24ರಂದು ನಿಧನನಾದ.
(ಎಂ.ಆರ್. ಕೆಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ